ನಾರದಗಡ್ಡೆ
ಕೃಷ್ಣಾ ನದಿಯ ಒಂದು ಸುಂದರ ನಡುಗಡ್ಡೆ. ರಾಯಚೂರು ತಾಲೂಕಿನಲ್ಲಿ, ರಾಯಚೂರಿನಿಂದ ಈಶಾನ್ಯಕ್ಕೆ ಸುಮಾರು 29ಕಿಮೀ. ದೂರದಲ್ಲಿದೆ. ಈ ನಡುಗಡ್ಡೆಗೆ ಕೊರವ (ಕೋಲನ) ಎಂಬ ಹೆಸರೂ ಉಂಟು. ಇಲ್ಲಿ ನಾರದ ತಪಸನ್ನಾಚರಿಸಿದನೆಂದು ಪ್ರತೀತಿ. ನಾರದನಿಗೆ ಅರ್ಪಿತವಾದ ಒಂದು ದೇವಾಲಯ ಇಲ್ಲಿದೆ.

	ಈ ನಡುಗಡ್ಡೆಯಲ್ಲಿ ಒಂದು ಪ್ರಸಿದ್ದ ವೀರಶೈವ ಮಠ ಇದೆ. ನೂರಾರು ವರ್ಷಗಳ ಹಿಂದೆ ಯೋಗಸಿದ್ದಿಯನ್ನು ಪಡೆದ ಚನ್ನಬಸವಸ್ವಾಮಿಗಳು ಇಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ಇಲ್ಲಿ ಅವರ ಸಮಾಧಿಯೂ ಒಂದು ಶಿವಯೋಗ ಪೀಠವೂ ಬಸವಣ್ಣನವರ ಒಂದು ಮಂದಿರವೂ ಇದೆ. ಪ್ರತಿವರ್ಷವೂ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಕಂಬಳಿ, ಹಿತ್ತಾಳೆ ಪಾತ್ರೆ, ಎತ್ತು ಮತ್ತು ಎತ್ತಿನ ಗಾಡಿಗಳ ವ್ಯಾಪಾರವಾಗುತ್ತದೆ.

	ನಾರದಗಡ್ಡೆಗೆ ಸಮೀಪದಲ್ಲಿ ಮತ್ತೊಂದು ನಡುಗಡ್ಡೆ ಇದೆ. ಇದನ್ನು ಕೂರ್ಮ ಗಡ್ಡೆ ಎಂದು ಕರೆಯುತ್ತಾರೆ. ಇಲ್ಲಿ ಒಂದು ದತ್ತಾತ್ರೇಯ ಪೀಠವೂ ಶ್ರೀಪಾದವಲ್ಲಭಸ್ವಾಮಿ ಪೀಠವೂ ಇವೆ. ಇದು ದತ್ತಾತ್ರೇಯನ ಮೂಲ ಸ್ಥಾನ ವೆಂದು ಪ್ರತೀತಿ. ಇಲ್ಲಿ ದತ್ತಾತ್ರೇಯನಿಗೆ ಮೀಸಲಾದ ಒಂದು ಮಂದಿರವಿದೆ. ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.		
  (ಕೆ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ